ಲೈನ್ ಮ್ಯಾನ್ ಸಂಬಂಧಗಳನ್ನು ಬೆಸೆದ ಪವರ್ ಮ್ಯಾನ್--ರೇಟಿಂಗ್: 3.5/5 ****
Posted date: 23 Sat, Mar 2024 08:26:47 AM
ಮೊಬೈಲ್, ಇಂಟರ್ ನೆಟ್ ಇದ್ಯಾವುದೂ ಇಲ್ಲದ ಕಾಲದಲ್ಲಿ ಮಾನವನ ಜೀವನ ಹೇಗಿತ್ತು, ಆಗ ಸಂಬಂಧಗಳು ಯಾವರೀತಿ ಗಟ್ಟಿಯಾಗಿರುತ್ತಿದ್ದವು ಸಾಂಪ್ರದಾಯಿಕ ಆಟ, ಪಾಠಗಳು ಅದೆಷ್ಡು ಸೊಗಸಾಗಿರುತ್ತಿದ್ದವು ಇಂಥ ಪ್ರಮುಖ ವಿಷಯಗಳನ್ನು ನಮಗೆಲ್ಲ ಸೆನಪು ಮಾಡಿಕೊಡುವಂಥ ಚಿತ್ರ ಲೈನ್ ಮ್ಯಾನ್. ಈಗಿನ ಕಾಲದಲ್ಲಿ ಆಧುನಿಕ ತಂತ್ರಜ್ಞಾನವನ್ನು ಮನುಷ್ಯ ಬೇಗೆ ತನ್ನ ಜೀವನದ ಅವಿಭಾಜ್ಯ ಅಂಗವಾಗಿ ಮಾಡಿಕೊಂಡಿದ್ದಾನೆ. ಎರಡು ವಾರ ವಿದ್ಯುತ್ ಇಲ್ಲದೆ ಹೋದರೆ ನಮ್ಮ‌ಜೀವನದಲ್ಲಿ ಏನೆಲ್ಲ ಬದಲಾವಣೆಗಳಾಗುತ್ತವೆ ಎಂಬುದನ್ನೂ ಸಹ ಈ ಚಿತ್ರ ಹೇಳುತ್ತದೆ. ನಾವು ದಿನನಿತ್ಯ ಬಳಸುವ ಯಂತ್ರ ಚಾಲಿತ ವಸ್ತುಗಳು ಉಪಯೋಗಕ್ಕೆ ಬರಬೇಕೆಂದರೆ ಕರೆಂಟ್ ಅತಿಮುಖ್ಯ. ಕರೆಂಟ್ ಇಲ್ಲದ ದಿನ ಯೋಚನೆ ಮಾಡುವುದಕ್ಕೂ ಅಸಾಧ್ಯ. ಮೊಬೈಲ್, ಟಿವಿ, ಕಂಪ್ಯೂಟರ್, ಮಿಕ್ಸಿ, ಗೀಸರ್, ಲೈಟ್ಸ್, ಫ್ಯಾನ್ ಇದ್ಯಾವ ವಸ್ತುವೂ ಕೆಲಸ ಮಾಡುತ್ತಿಲ್ಲವೆಂದರೆ ನಮ್ಮ ಮನಸ್ಥಿತಿ ಹೇಗಾಗಿರಬೇಡ, ಲೈನ್ ಮ್ಯಾನ್ ಚಿತ್ರದಲ್ಲಿ ಇಂಥ ಅನೇಕ  ಸನ್ನಿವೇಶಗಳನ್ನು  ಸೃಷ್ಟಿಸುವ ಮೂಲಕ ವೀಕ್ಷಕರಿಗೆ ಒಂದು ಉತ್ತಮ ಸಂದೇಶ ನೀಡುವಲ್ಲಿ ಯಶಸ್ವಿಯಾಗಿದ್ದಾರೆ ನಿರ್ದೇಶಕ ರಘು ಶಾಸ್ತ್ರಿ.
 
ಚಂದಕವಾಡಿ ಎಂಬ  ಕುಗ್ರಾಮಕ್ಕೆ ನಟೇಶ್ ಯಾನೆ ನಟ ಒಬ್ಬನೇ ಲೈನ್ ಮ್ಯಾನ್. ಇಡೀ ಊರಿಗೆ ಕರೆಂಟ್ ಹಾಕೋ  ಪವರ್ ಮ್ಯಾನ್. ಆತ ಕರೆಂಟ್ ಕೊಟ್ಟಿಲ್ಲ ಎಂದರೆ ಊರಿಡೀ ಕತ್ತಲೆಯೇ. ಹಾಗಾಗಿ ಲೈನ್ ಮ್ಯಾನ್ ಹಳ್ಳಿ ಜನರ ಬದುಕಿನಲ್ಲಿ ಮುಖ್ಯ ಪಾತ್ರ ವಹಿಸುವ ವಿಚಾರವನ್ನು ಈ ಸಿನಿಮಾದಲ್ಲಿ ಅತ್ಯಂತ ಸುಂದರವಾಗಿ ಚಿತ್ರೀಕರಿಸಿದ್ದಾರೆ.
 
ಸಿನಿಮಾ, ನಾಟಕ ಎಂದು ಹುಚ್ಚು ಅಂಟಿಸಿಕೊಂಡಿರೊ ಮೂವರು ಪಡ್ಡೆ ಹುಡುಗರ ಹಾಸ್ಯ, ಕದ್ದು ಮುಚ್ಚಿ ಓಡಾಡೋ ಪ್ರೇಮಿಗಳು, ಶಾಲಾ, ಕಾಲೇಜಿನ ಮಕ್ಕಳು, ಸೀರಿಯಲ್ ನೋಡಿ ಸಂಸಾರ ಮಾಡೋ ಮನೆ ಹೆಂಗಸರು, ಊರಿನ ಗೌಡರು, ಪಂಚಾಯಿತಿ ಕಟ್ಟೆ, ಕೆಲ ಯುವಕರಿಗೆ ರೀಲ್ಸ್ ಹುಚ್ಚು, ರಾಗಿ ಮಿಲ್, ಇಲೆಕ್ಟ್ರಾನಿಕ್ಸ್ ಅಂಗಡಿ ಜೊತೆಗೆ ಗ್ರಾಮೀಣ ಕ್ರೀಡೆ, ಹರಟೆ ಕೂಟ ಇವೆಲ್ಲದರ ಸುತ್ತ ಹೆಣೆದ ಕಥೆಯಲ್ಲಿ ಹಳ್ಳಿ ಸೊಗಡಿನ ಜೀವನವನ್ನು ತೆರೆದಿಡುವ ಪ್ರಯತ್ನ ಈ ಸಿನಿಮಾದಲ್ಲಾಗಿದೆ.
 
ಪರ್ಪಲ್ ರಾಕ್ ಎಂಟರ್ಟೈನ್ಮೆಂಟ್ ನಿರ್ಮಾಣದ ಈ ಚಿತ್ರದಲ್ಲಿ ನಟ ಪಾತ್ರದಲ್ಲಿ ತ್ರಿಗುಣ್ ಉತ್ತಮ ಅಭಿನಯ ನೀಡಿದ್ದಾರೆ. ನಟನ ಸ್ನೇಹಿತನಾಗಿ kcc ತಂಡದ ಆಟಗಾರ ದಿಲೀಪ್ ಕೆಂಪೇಗೌಡ ಪ್ರೇಕ್ಷಕರನ್ನು ರಂಜಿಸುತ್ತಾರೆ.
 
ಗ್ರಾಮದ ಹಿರಿಯ ಸೂಲಗಿತ್ತಿ 99 ವರ್ಷದ ಶಾರದಮ್ಮ ನೂರಾರು ಹೆರಿಗೆಗಳನ್ನು ಮಾಡಿಸಿದ ಅನುಭವಿ.  ಊರಿನ ಎಲ್ಲರಿಗೂ ಶಾರದಮ್ಮ ಎಂದರೆ ವಿಶೇಷ ಗೌರವ. ಅವರ ನೂರನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಬೇಕೆಂದು ಊರಿನ ಜನರೆಲ್ಲ ತಯಾರಿ ನಡೆಸುತ್ತಾರೆ. ವೇದಿಕೆಯೂ ಸಿದ್ದವಾಗುತ್ತದೆ. ಆಗ ಕರೆಂಟ್ ಕೊಡಲು ಲೈನ್ ಮ್ಯಾನ್ ನಟೇಶ ನಿರಾಕರಿಸುತ್ತಾನೆ.  ಒಂದು ಬಲವಾದ ಕಾರಣದಿಂದ ಊರ ಜನರೆಲ್ಲ  15 ದಿನ ಕರೆಂಟ್ ಇಲ್ಲದೆ ಬದುಕಬೇಕಾಗುತ್ತದೆ. ಆಗ ಜನ ದೀಪದ ಮೊರೆ ಹೊಗ್ತಾರೆ. ಎಲ್ಲರೂ ಒಟ್ಟಾಗಿ ಊಟ ಮಾಡುವುದು, ಆಟ ಆಡುವುದು ನಡೆಯುತ್ತದೆ. ಎಲ್ಲರೂ  ಪರಸ್ಪರ ಸಂಬಂಧಗಳ ಮಹತ್ವವನ್ನು ಅರಿತುಕೊಳ್ಳುತ್ತಾರೆ. ಆದರೆ ಯಾವ ಕಾರಣಕ್ಕೆ ಕರೆಂಟ್ ಕೊಡಲು ಲೈನ್ ಮ್ಯಾನ್ ನಟ ನಿರಾಕರಿಸುತ್ತಾನೆ ಎಂಬುದನ್ನು  ತಿಳಿಯಬೇಕಾದರೆ  ನೀವು ಥೇಟರಿನಲ್ಲಿ ಸಿನಿಮಾ ನೋಡಲೇಬೇಕು. ಸೂಲಗಿತ್ತಿಯ ಪಾತ್ರವನ್ನ ಹಿರಿಯನಟಿ ಬಿ.ಜಯಶ್ರೀ ಅದ್ಭುತವಾಗಿ ನಿರ್ವಹಿಸಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed